Random Video

ಕಾಡು ಪ್ರಾಣಿಗಳಿಗೆ ಹಾಟ್​ಸ್ಪಾಟ್ ಆದ ಜೋಯಿಡಾದ ಗಣೇಶಗುಡಿ ಬಳಿಯ ಬಸ್ ಸ್ಟಾಪ್!

2025-06-25 1,274 Dailymotion

ಕಾರವಾರ: ಜೋಯಿಡಾ ತಾಲೂಕಿನ ಗಣೇಶಗುಡಿಯ ಅವೆಡ ರಸ್ತೆಯಲ್ಲಿರುವ ಬಸ್ ಸ್ಟಾಪ್ ಈಗ ಕಾಡು ಪ್ರಾಣಿಗಳ ನೆಚ್ಚಿನ ತಾಣವಾಗಿ ಮಾರ್ಪಟ್ಟಿದೆ. ಮಂಗಳವಾರ ರಾತ್ರಿ ಸುಮಾರು 10 ಗಂಟೆಗೆ ಕರಡಿಯೊಂದು ರಾಜಾರೋಷವಾಗಿ ಈ ಬಸ್ ಸ್ಟಾಪ್‌ನ ಕಟ್ಟೆಯ ಮೇಲೆ ಕುಳಿತಿರುವುದು ಕಂಡುಬಂದಿದೆ. ಈ ದೃಶ್ಯವನ್ನು ಸ್ಥಳೀಯ ವಾಹನ ಚಾಲಕರೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅಚ್ಚರಿಯ ಸಂಗತಿಯೆಂದರೆ, ಎರಡು ದಿನಗಳ ಹಿಂದೆಯಷ್ಟೇ ಇದೇ ಬಸ್ ಸ್ಟಾಪ್‌ನಲ್ಲಿ ಒಂದು ಚಿರತೆ ಕೂಡ ಕಟ್ಟೆಯ ಮೇಲೆ ಕುಳಿತಿರುವುದು ಕಂಡುಬಂದಿತ್ತು. ಕಾಡಿನ ಗಡಿಗೆ ಹೊಂದಿಕೊಂಡಿರುವ ಈ ಪ್ರದೇಶದಲ್ಲಿ ಪ್ರಾಣಿಗಳು ನಾಡಿಗೆ ಬರುವುದು ಹೊಸತಲ್ಲವಾದರೂ, ಬಸ್ ಸ್ಟಾಪ್ ಅನ್ನು ವಿಶ್ರಾಂತಿ ತಾಣವನ್ನಾಗಿ ಮಾಡಿಕೊಂಡಿರುವುದು ಸ್ಥಳೀಯರಲ್ಲಿ ಆಶ್ಚರ್ಯ ಮತ್ತು ಆತಂಕ ಎರಡನ್ನೂ ಮೂಡಿಸಿದೆ.

ರೆಸಾರ್ಟ್‌ನಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವಾಹನ ಚಾಲಕರು ಕರಡಿಯನ್ನು ಕಂಡ ಕೂಡಲೇ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದಾರೆ. ಕಾಡಿನಿಂದ ಹೊರಬಂದು ನಾಡಿನ ಮಧ್ಯೆ, ಅದೂ ಬಸ್ ಸ್ಟಾಪ್‌ನಲ್ಲಿ ಪ್ರಾಣಿಗಳು ಹೀಗೆ ಕಾಣಿಸಿಕೊಳ್ಳುತ್ತಿರುವುದು ಅರಣ್ಯ ಇಲಾಖೆಗೂ ಸವಾಲಾಗಿ ಪರಿಣಮಿಸಿದೆ. ಸದ್ಯಕ್ಕೆ, ಈ ಬಸ್ ಸ್ಟಾಪ್ ಕಾಡು ಪ್ರಾಣಿಗಳಿಗೆ 'ಹಾಟ್ ಸ್ಪಾಟ್' ಆಗಿ ಗುರುತಿಸಿಕೊಂಡಿದೆ.

ಇದನ್ನೂ ಓದಿ: ಕಾಡಿಗೆ ಸರಿಯುತ್ತಿರುವ ನಾಡು: ಕಾಡುಪ್ರಾಣಿ ಸಂತತಿಗೆ ಅರಣ್ಯದಲ್ಲಿ ಸ್ಥಳ ಬೇಕು- ಕೃಪಾಕರ, ಸೇನಾನಿ ಮಾತು